ನರಸಿಂಹ ಪರ್ವತದ ಒಂದು ಮುಂಜಾನೆ
11:45 AMಆ ಮುಂಜಾನೆಯ ಚಳಿಯಲ್ಲಿ ಕಣ್ಣು ಬಿಟ್ಟಾಗ ಕಾಣಿಸಿತು ಕಿಗ್ಗಿಸಿ ಬರುತ್ತಿದ್ದ ಚೂರು ಬೆಳಕು. ಮೈ ಕೊಡವಿ ಎದ್ದು ಮೇಲಂಗಿ ಧರಿಸಿ ಡೇರೆಯನ್ನು ತೆರೆದಾಗ ಜುಮ್ ಅಂತನೆ ಅಪ್ಪಳಿಸಿತು ಆ ತಂಗಾಳಿ. ಪ್ರತಿ ಪರ್ವತಾರೋಹಣದ ಸುಂದರ ಸೊಬಗು ಅದರ ಮುಂಜಾನೆಯಲ್ಲಿ ಅಡಗಿದೆ. ಸ್ಥಳವನ್ನು ಆಯ್ಕೆ ಮಾಡಿ ಪೂರ್ವದಲ್ಲಿ ನಭವನ್ನು ಗೋಚರಿಸುತ್ತ ಆ ಲೋಕದಲ್ಲಿ ಕಳೆದು ಹೋಗುವುದು ಒಂದು ಸುಂದರ ಅನುಭವ.
ಬೇಗನೆ ಡೇರೆ ಆಚೆ ಕಾಲಿಟ್ಟು ಚಪ್ಪಲಿ ಧರಿಸಿ ಹೊರಟೆ ಪೂರ್ವ ದಿಕ್ಕಿನಲ್ಲಿ ಒಂದು ಬಂಡೆಯನ್ನು ಹುಡುಕುತ್ತ. ಋತುಚಕ್ರ ಮಳೆಗಾಲದಿಂದ ಚಳಿಗಾಲಕ್ಕೆ ಕಾಲಿಡುವ ಸಮಯದಲ್ಲಿ ದಿಂಬಿನ ತನಕ ಬೆಳೆದಿರುವ ಹುಲ್ಲುಗಾವಲು ತಾನು ಹಸಿರಗಿರಲಾ ಅಥವಾ ಹಳದಿಯಾಗಿರಲಾ ಅನ್ನುವ ತ್ರಿಶಂಕು ಸ್ಥಿತಿ ಅಲ್ಲಿ ಕಾಣುತಿತ್ತು. ಅದರ ಒಳಗಡೆ ಅರ್ಧ ಮರೆಯಾಗಿರುವ ನನ್ನ ಕಾಲುಗಳು ನಡೆದವು ದೂರದಲ್ಲಿ ಕಾಣುತ್ತಿದ್ದ ಆ ಬಂಡೆ ಕಡೆಗೆ.
ಸರಸರನೆ ನೂರು ಗಜ ಹೆಜ್ಜೆ ಹಾಕಿ ಬಂಡೆಯನ್ನು ಆಕ್ರಮಿಸಿಕೊಂಡೆ. ಸೂರ್ಯ ಇನ್ನು ಅಡಗಿಕೊಂಡಿದ್ದ. ಚೂರು ಚೂರು ಬಂಗಾರದ ಬೆಳಕು ಮೂಡುತ್ತಿತ್ತು ಅಳಿದ ಉಳಿದ ಮೋಡಗಳ ಮೇಲೆ. ಪಕ್ಕದಲ್ಲಿ ಕಾಣಿಸಿತು ಪರ್ವತಗಳ ಸಾಲು. ಒಂದರ ಮೇಲೆ ಇನ್ನೊಂದು ಬಿದ್ದಿಕೊಂಡಿರುವ ಪದರದ ಹಾಗೆ ನೀಲವರ್ಣದ ಎಲ್ಲ ಛಾಯೆಗಳು ಕಲಾವಿದನ ಕುಂಚದಿಂದ ಹೊಮ್ಮಿದ ಹಾಗೆ ಹರಡಿಕೊಂಡಿದ್ದವು. ಆ ಬದಿಯ ಹೂವಿನ ಮೇಲೆ ಒಂದು ದುಂಬಿ ತನ್ನ ದಿನಚರಿಯನ್ನು ಆರಂಭಿಸಲು ತೊಡಗಿತ್ತು. ಅದರ ರೆಕ್ಕೆಯ ಬಡಿತ ನಸುಕಿನ ನಿಶಬ್ದತೆಯನ್ನು ತಿರುಚಿತು.
ತಂಗಾಳಿಗೆ ಮುಖ ಒಡ್ಡಿ ನಿಧಾನವಾಗಿ ಕಣ್ಣು ಮುಚ್ಚಿದೆ. ಕೆಲವು ಕ್ಷಣಗಳು ಸರಿದಿರಬಹುದು, ರೆಪ್ಪೆ ಬಿಟ್ಟಾಗ ಅಗೋ, ಕಾಣಿಸಿತು ಕ್ಷಿತಿಜದಿಂದ ಇಣುಕುತಿದ್ದ ಕೆಂಪು ಬಣ್ಣದ ಚೆಂಡು. ಆಕಾಶ ಈಗ ಪೂರ್ಣವಾಗಿ ಕಿತ್ತಳೆ ಹಳದಿ ಬಣ್ಣದ ಮಿಶ್ರಣವಾಗಿತ್ತು. ಅದನ್ನು ನೋಡುತ್ತಾ ನನ್ನನ್ನು ನಾನು ಮರೆತೆ. ಎಚ್ಚರವಾದಾಗ ಸೂರ್ಯ ಪ್ರಖರವಾಗಿದ್ದ. ಎದ್ದು ನಿಂತು ಚಪ್ಪಲಿ ಧರಿಸಿ ಡೇರೆಯತ್ತ ಹೊರಟಾಗ ಹೊಳೆಯಿತು ನಾಳೆ ಬೆಂಗಳೂರಿನ ಮುಂಜಾನೆ. ನಸುನಗು ಮೂಡಿತು ಮುಖದಲ್ಲಿ.
0 comments